Wednesday, February 17, 2010

ಭಾವಾಲೋಕನ

ಸಮಯ ಸಾಗುತಿದೆ ಮುಂದೆ,
ಗತಿಯ ಯಾಕೋ ಮರೆತಂತೆ,
ಗಳಿಗೆ ಕೂಡುತಿದೆ ಇಂದೆ,
ಮಿತಿಯ ಎಂದೋ ಕಳೆದಂತೆ,
ಹೃದಯ ಹೋಗುತಿದೆ ಹಿಂದೆ,
ವಿಷಯ ಏನೋ ಇದೆಯಂತೆ..

ಗುರುತು ಬೇಡಿ ಮನ ಕರೆದಾಗ,
ಒಳಿತು ಎಲ್ಲೋ ಅವಿತಂತೆ,
ನೆನಪು ಕಾಡಿ ಈಗ ಬರುವಾಗ,
ಒಲವು ಕದ್ದು ಕುಳಿತಂತೆ,
ಹುರುಪು ಚಿಗುರಿ ಮೆಲ್ಲ ಬೆಳೆದಾಗ,
ನಲಿವು ಎದ್ದು ಕುಣಿದಂತೆ..

ಮುಗಿಲು ರಾಶಿಯೇ ಕವಿದಾಗ,
ತಾರೆ ಅರಸಿ ನಾನು ಹೊರಟಂತೆ,
ಸಿಡಿಲು ಬಡಿತವೆ ಪ್ರಿಯರಾಗ,
ಧಾರೆ ಸುರಿಸಿ ಬಾನು ತೆರೆದಂತೆ,
ಮಿಗಿಲು ನೋಟವೇ ಅದು ಈಗ,
ಸೂರೆಗೊಳಿಸಿ ಮನಸು ಸೆಳೆದಂತೆ..

ಸೋಲಿಗೆ ಹಾಕುವೆ ಮುಕ್ತಾಯ,
ಗೆಲುವಿಗೆ ತೆರೆಯುವೆ ಅಧ್ಯಾಯ,
ಚಿಂತೆಗೆ ಬಂಧನವೇ ನ್ಯಾಯ,
ಸಮಯಕೆ ನೀಡುವೆ ನಾ ಗತಿಯ,
ಗಳಿಗೆಗೆ ತೋರುವೆ ನಾ ಮಿತಿಯ,
ಹೃದಯಕೆ ತುಂಬುವೆ ಈ ವಿಷಯ..